ಫಿರಿಷ್ಟಾ, ಮಹಮದ್ ಕಾಸಿಮ್		
 	ಸು. 1570-1612. ಮಧ್ಯಯುಗದ ಪ್ರಖ್ಯಾತ ಪರ್ಷಿಯನ್ ಇತಿಹಾಸಕಾರ. ಕ್ಯಾಸ್ಪಿಯನ್ ಸಮುದ್ರದ ದಡದಲ್ಲಿರುವ ಆಸ್ಟ್ರಬಾದ್‍ನಲ್ಲಿ ಸು. 1570ರಲ್ಲಿ ಹುಟ್ಟಿದ. 1589ರಲ್ಲಿ ಭಾರತಕ್ಕೆ ಬಂದು ಬಿಜಾಪುರದಲ್ಲಿ ನೆಲೆಸಿ ಇಮ್ಮಡಿ ಇಬ್ರಾಹಿಂ ಆದಿಲ್ ಶಾಹನ ಆಶ್ರಯದಲ್ಲಿ ತನ್ನ ಬಾಳಿನ ಉಳಿದ ಭಾಗವನ್ನು ಕಳೆದ. ಭಾರತದ ಇತಿಹಾಸವನ್ನು ರಚಿಸಲು ಫಿರಿಷ್ಟಾನನ್ನು ಆದಿಲ್ ಶಾಹ ನೇಮಕ ಮಾಡಿಕೊಂಡ. ಅವನು ಬರೆದ ಗ್ರಂಥದ ಹೆಸರು ತರೀಖ್-ಇ-ಫಿರಿಷ್ಟಾ. ಇದು 1609ರಲ್ಲಿ ಪೂರ್ಣಗೊಂಡಿತು.

	ಫಿರಿಷ್ಟಾ ರಚಿಸಿದ ಭಾರತೀಯ ಇತಿಹಾಸದಲ್ಲಿ ಮುಸ್ಲಿಮರ ಆಳ್ವಿಕೆಯ ಕಾಲಕ್ಕೆ ಪ್ರಾಶಸ್ತ್ಯ ದೊರಕಿದ್ದರೂ ಅವನು ಅವರ ಆಕ್ರಮಣಕ್ಕೆ ಹಿಂದಿನ ಹಿಂದೂಸ್ತಾನದ ಇತಿಹಾಸವನ್ನು ತನ್ನ ಪೀಠಿಕೆಯಲ್ಲಿ ಸಂಕ್ಷಿಪ್ತವಾಗಿ ನೀಡಿದ್ದಾನೆ. ಅರಬ್ಬರು ಪೌರಸ್ತ್ಯ ರಾಜ್ಯಗಳಲ್ಲಿ ವಿಜಯ ಗಳಿಸಿದ್ದನ್ನೂ ಇವನು ವಿವರಿಸಿದ್ದಾನೆ. ಮಧ್ಯಯುಗದ ಮುಸ್ಲಿಂ ಇತಿಹಾಸಕಾರರ ಪೈಕಿ ಫಿರಿಷ್ಟಾ ನಂಬಿಕೆಗೆ ಅರ್ಹರಾದವರಲ್ಲೊಬ್ಬನೆಂದು ಪರಿಗಣಿತನಾಗಿದ್ದಾನೆ. ಭಾರತದ ಆ ಕಾಲದ ಇತಿಹಾಸ ರಚಿಸುವವರಿಗೆ ಇದೊಂದು ಮುಖ್ಯ ಆಕರ ಗ್ರಂಥವಾಗಿದೆ. ಆಧುನಿಕ ಯುಗದ ಮೊದಮೊದಲ ಭಾರತೀಯ ಇತಿಹಾಸ ಲೇಖಕರು ಇವನಿಗೆ ಋಣಿಗಳಾಗಿದ್ದಾರೆ. ಜನರಲ್ ಜೆ. ಬ್ರಿಗ್ಸ್ ಇದನ್ನು ಇಂಗ್ಲಿಷಿಗೆ ಭಾಷಾಂತರಿಸಿ 1829ರಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದ. ದಿ ಹಿಸ್ಟೋರಿ ಆಫ್ ದಿ ರೈಸ್ ಆಫ್ ದಿ ಮಹೊಮೆಡನ್ ಪವರ್ ಇನ್ ಇಂಡಿಯ ಎಂಬುದು ಇದರ ಹೆಸರು. ಫಿರಿಷ್ಟಾ 1612ರಲ್ಲಿ ತೀರಿಕೊಂಡನೆಂದು ಬ್ರಿಗ್ಸ್ ಹೇಳಿದ್ದಾನೆ.											(ಎಚ್.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ